ಕಾದಂಬರಿ
ದೇವಿ ಕುರುಬತಿ ಐಗುಪ್ತದ ಐತಿಹಾಸಿಕ ಐಸಿರಿ ದಂತ ಕಥೆಯಾದ ಈಜಿಪ್ಟ್‌ನ ರಾಣಿ ಐತಿಹಾಸಿಕ ಕಾದಂಬರಿ
ಲೇಖಕ: ಡಾ|| ಶುಭದಾ ಎಚ್.ಎನ್.
₹220₹26015% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಈಗ್ಗೆ ಮೂರು ಸಾವಿರ ವರ್ಷಗಳ ಹಿಂದೆ ಕುರುಬ ವಂಶದ ಪೆರೋಗಳು ಮುನ್ನೂರು ವರ್ಷಗಳಿಗೂ ದೀರ್ಘಕಾಲ ದೇಶವಾಳಿದ್ದರೆಂದೂ, ಹಾಗಾಗಿ ಕುರುಬರ ಆಡಳಿತದ ಹೆಜ್ಜೆಗಳು ಚರಿತ್ರೆಯಲ್ಲಿ ಮೂಡಿವೆಯೆಂದೂ ಹೇಳಿದರು.
ಭಾರತವೂ ಅನೇಕ ಕುರುಬ ವಂಶದ ದೊರೆಗಳು, ಅಶೋಕನಂತಹ ಚಕ್ರವರ್ತಿಗಳು, ಅಹಲ್ಯಾ ಬಾಯಿಯಂತಹ ಸೃಜನಶೀಲ ಆಡಳಿತಗಾರರನ್ನು ತನ್ನ ಸುವರ್ಣಚರಿತ್ರೆಯಲ್ಲಿ ದಾಖಲಿಸಿದೆ. ಸ್ಕಾಟ್‌ಲೆಂಡ್, ಇಸ್ರೇಲ್, ಆಫ್ರಿಕ, ಮಧ್ಯಪ್ರಾಚ್ಯದ ಕೆಲವೆಡೆಯೂ ಕುರುಬ ಕುಲದವರು ಪ್ರಜಾವತ್ಸಲರಾಗಿ, ಸಮರ್ಥ ಆಡಳಿತಗಾರರಾಗಿದ್ದರೆಂದು ತಿಳಿದಿತ್ತು. ಪ್ರಾಯಶಃ ದಟ್ಟ ಅರಣ್ಯಗಳಲ್ಲಿ, ಬೆಟ್ಟ ತಪ್ಪಲುಗಳಲ್ಲಿ. ಎಲ್ಲ ಋತುಗಳ ವೈಪರೀತ್ಯದಲ್ಲಿ. ತಮ್ಮ ಮಂದೆಯನ್ನು ಪಾಲಿಸುವ ಕುರುಬರಿಗೆ ಪ್ರಕೃತಿಯೇ ಅನೇಕ ಪಾಠಗಳನ್ನು ಕಲಿಸಿರಬಹುದು. ಅಪಾಯಗಳ ಮುನ್ನರಿವು, ಎಚ್ಚರ, ದೀರ್ಘನಡಿಗೆಯ ಸಾಮರ್ಥ್ಯ. ಇವೆಲ್ಲ ಅವರಿಗೆ ದಕ್ಕಿರಬಹುದು. ಪ್ರಕೃತಿ, ಋತುಗಳು, ಹಗಲು, ರಾತ್ರಿಗಳು, ಗುಡುಗು-ಮಿಂಚು ಪ್ರವಾಹ, ಕಡೆಗೆ ಕುರಿಮರಿಗಳೂ ಅವರನ್ನು ಸಂವೇದನಾ ಶೀಲರನ್ನಾಗಿಸಬಹುದು. ಈ ಗುಣಗಳೇ ಅವರನ್ನು ಪ್ರಾಕೃತಿಕವಾಗಿ ನಾಯಕರನ್ನಾಗಿಸುವುದೇನೋ? ಈ ಎಲ್ಲವೂ ನನ್ನ ತರ್ಕವಷ್ಟೆ. ಇದಕ್ಕೆ ಬಲ್ಲವರು, ಸಮಾಜ ವಿಜ್ಞಾನಿಗಳು ಉತ್ತರಿಸಬೇಕು.
ಆದರೆ ನನ್ನನ್ನಾಕರ್ಷಿಸಿದ್ದು ದಂತ ಕಥೆಯಾದ ಒಬ್ಬ ರಾಣಿ. ಪೆರೋ ದೊರೆಗಳು ಸೂರ್ಯದೇವನ ಅವತಾರವೆಂದು ಜನ ನಂಬಿ ನಡೆಯುತ್ತಿದ್ದ ಯುಗವದು. ಅಂದಿನದು ಪುರುಷ ಪ್ರಾಬಲ್ಯದ ಸಮಾಜರಚನೆ. ಕೆಲವು ರಾಣಿಯರು ಪರೋಕ್ಷವಾಗಿ ರಾಜಕಾರಣ, ಆಡಳಿತ, ಅಂತಃಪುರ, ಸೆರೆಮನೆ ಯುದ್ಧ ಹಾಗೂ ನ್ಯಾಯಸ್ಥಾನಗಳನ್ನೂ ನಿಯಂತ್ರಿಸುತ್ತಿದ್ದರಂತೆ. ಆದರೆ ಸಿಂಹಾಸನವೇರಲಾಗಲಿಲ್ಲ. ಇಂತಹುದರಲ್ಲಿ ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಪೆರೋ ದೊರೆಗಳ ರೂಢಿಗತ ಆಡಳಿತದ ವಿನ್ಯಾಸವನ್ನು ಮುರಿದು, ರಚನಾತ್ಮಕ, ಗುಣಾತ್ಮಕ ಆಡಳಿತದ ಮಾದರಿಯನ್ನು ಅಳವಡಿಸಿ-ಕೊಂಡು ಪ್ರಜೆಗಳ ಮನಸೂರಗೊಂಡು ರಾಣಿಯೊಬ್ಬಳ ಕಥೆಯನ್ನು ನಿಮಗೆ ಹೇಳಬೇಕೆನಿಸಿತು.
ಅನೆಪ್, ಪೆರೋನ ಉಪ ಪತ್ನಿಯೊಬ್ಬಳ ಮಗಳು. ಅವಳದು ಶುದ್ಧ ರಾಜಕೀಯ, ಧಾರ್ಮಿಕ ಕಾರಣಗಳಿಂದಾದ ವಿವಾಹ. ಅಂದಿನ ಸಂಪ್ರದಾಯದಂತೆ ಪೆರೋಗಳ ಪಟ್ಟದರಸಿಯರು ಅವರ ಸಹೋದರಿ ಇಲ್ಲವೇ ಮಗಳೇ ಆಗಬೇಕಾಗಿತ್ತು. ಹೀಗೆ ಪೆರೋಪೇಪಿ ಶುದ್ಧರಕ್ತದ ಸಂತಾನವನ್ನಪೇಕ್ಷಿಸಿ ತನ್ನ ಮಲ ಸಹೋದರಿಯನ್ನೆ ಪಟ್ಟದರಸಿಯನ್ನಾಗಿ ಸ್ವೀಕರಿಸುತ್ತಾನೆ. ಇಂತಹ ವಿಷಮ ವಿವಾಹದಿಂದ ತಳಮಳ, ಮುಜುಗರಕ್ಕೊಳಗಾಗಿ, ಚಡಪಡಿಸಿದರೂ ಅದನ್ನೆಲ್ಲ ತನ್ನ ವ್ಯಕ್ತಿತ್ವದ ಬಲದಿಂದ ಮೀರಿ, ದೇಶದ ಒಳಿತಿಗಾಗಿ ತನ್ನನ್ನೆ ಸಮರ್ಪಿಸಿಕೊಂಡ ಆ ರಾಣಿ ಸ್ತ್ರೀಕುಲದ ಪ್ರತಿಭೆ, ಶಕ್ತಿ ಹಾಗೂ ಘನತೆಯ ಮಾದರಿ. ಅಂದಿನ ಈಜಿಪ್ಟ್‌ನ ಸಮಾಜ, ಅರಮನೆಯ ಜೀವನ, ಆಡಳಿತದ ಬಿಗಿ, ಅಂತಃಪುರದ ರಾಜಕಾರಣ, ಬೃಹತ್ ಗೋರಿಮನೆಗಳ ನಿರ್ಮಾಣ, ಜಲಸಾರಿಗೆ ಇವೆಲ್ಲ ಇಲ್ಲಿ ಚಿತ್ರಿತವಾಗಿದೆ. ಈಜಿಪ್ಟ್‌ನ ಅರಮನೆ, ದೇಗುಲಗಳ ಎಲ್ಲ ಧಾರ್ಮಿಕ ಕಲಾಪಗಳಿಗೂ ಕುರುಬಗೇರಿಗೆ ಮೊದಲ ಆಹ್ವಾನವಿತ್ತು. ಪ್ರತಿ ಶಾಸ್ತ್ರ ವಿಧಿಯಲ್ಲೂ ಆಡಿನ ಹಾಲಿನ ಬಳಕೆಯಾಗುತ್ತಿತ್ತು ಎಂಬುದನ್ನೂ ಕೆಲವು ಶಾಸನಗಳಲ್ಲಿ ನೋಡಿದೆ.
ಆಡಿನ ಹಾಲನ್ನು ಮಂಗಳಪ್ರದ ವಸ್ತುವೆಂದು ಆ ಸಂಸ್ಕೃತಿ ಒಪ್ಪಿತ್ತು. ಕುರುಬ ಕುಲದ ರಾಣಿಯೊಬ್ಬಳು, ಸನ್ನಿವೇಶಗಳಿಗೆ ತಕ್ಕಂತೆ ಸ್ಪಂದಿಸುತ್ತ ತಾನೂ ವಿಕಾಸವಾಗಿದ್ದಲ್ಲದೆ, ಸ್ವತಃ ಸಿಂಹಾಸನವನ್ನೇರುತ್ತಾಳೆ. ಜಡ್ಡುಗಟ್ಟಿದ್ದ ಆಡಳಿತಕ್ಕೆ ತನ್ನ ಪ್ರೀತಿಯ, ವಿಶ್ವಾಸದ ಸ್ಪರ್ಶ ಕೊಡುತ್ತಾಳೆ. ಕ್ರಾಂತಿಕಾರಿ ಆಡಳಿತ ಸುಧಾರಣೆಗಳನ್ನು ಧರ್ಮದ ಚೌಕಟ್ಟಿನಲ್ಲೇ ತರುತ್ತಾಳೆ. ಈಜಿಪ್ಟ್‌ನ ಸಂಪ್ರದಾಯ ಶೀಲ ಸಮಾಜದ ಮನಸೂರೆಗೊಂಡು ಅದರಿಂದಲೇ "ದೇವಿ ಕುರುಬತಿ" ಎಂಬ ಬಿರುದು ಪಡೆಯುತ್ತಾಳೆ. ಅವಳ ಸಮರ್ಪಣೆ, ತ್ಯಾಗ ಅನುಪಮ. ಆಕೆ ತನ್ನವರಿಗಾಗಿ ಚಿಂತಿಸಿ, ದುಡಿದು ಆಡಳಿತಕ್ಕೆ ಸೃಜನಶೀಲ ಆಯಾಮ ನೀಡಿ ಪ್ರಜಾವತ್ಸಲೆಯಾಗಿ, ಕಡಗೆ ದೇವಿಯೇ ಆಗುವ ಈ ಪ್ರಕ್ರಿಯೆ ಕಂಬಳಿ ಹುಳುವೊಂದು ವರ್ಣಮಯ ಚಿಟ್ಟಿಯಾಗುವಷ್ಟೇ ಸಹಜವಾಗಿದೆ, ಸುಂದರವಾಗಿದೆ. ನೈಲ್‌ನದಿಯ ದಂಡೆಗುಂಟ ಹರಡಿಕೊಂಡಿರುವ ಈ ಕಥೆಯಲ್ಲಿ ವಾಸ್ತವಾಂಶಗಳು, ಚರಿತ್ರೆಯ ಆಧಾರ ಹಾಗೂ ಕಥೆಗಾರ್ತಿಯೊಬ್ಬಳ ಕಲ್ಪನೆಯೂ ಇದೆ. ಆಡಳಿತ ಸುಧಾರಣೆ ಒಂದು ನಿರಂತರ ಪ್ರಕ್ರಿಯೆ. ಇತಿಹಾಸದಿಂದಲೂ ನಾವು ಈ ವಿಚಾರದಲ್ಲಿ ಸ್ಫೂರ್ತಿಗೊಳ್ಳಬಹುದು. ಮನುಷ್ಯ ಸಂಘಜೀವಿಯಾದಾಗಿನಿಂದಲೂ ಆಡಳಿತದ ತಂತ್ರಗಳು ಅಸ್ತಿತ್ವದಲ್ಲಿವೆ. ಮನುಷ್ಯ ನಾಗರಿಕನಾದಂತೆ, ವಿಕಾಸಗೊಂಡಂತೆ ಆಡಳಿತದ ತಂತ್ರಗಳೂ, ಪಟ್ಟುಗಳೂ ವಿಕಾಸವಾಗಿದೆ. ಆಡಳಿತದಲ್ಲಿ ಉತ್ತಮಿಕೆಯನ್ನು ತರಲು ಎಲ್ಲ ಪ್ರಪಂಚದ ಪ್ರಭುತ್ವಗಳೂ ನಿರಂತರ ಪ್ರಯತ್ನಪಟ್ಟಿವೆ.
ಸಾವಿರಾರು ವರ್ಷಗಳ ಹಿಂದೆಯೇ ಸ್ತ್ರೀಯೊಬ್ಬಳು ಐಗುಪ್ತದಂತರ ಸಿರಿವಂತ ರಾಷ್ಟ್ರದ ಪಟ್ಟದ ರಾಣಿಯಾಗಿ, ಅಲಂಕಾರ, ಆಭರಣ ಹಾಗೂ ಸುಖ ಭೋಗಗಳಲ್ಲಿ ಮೈಮರೆಯದೇ ಜನತೆಗಾಗಿ ಮಿಡಿದದ್ದು ನನ್ನ ಮನಸೂರೆಗೊಂಡಿತು. ಅವಳು ಸ್ವಾರ್ಥಿಯಾಗದೇ, ಅಳುಕದೇ ಹಂತ ಹಂತವಾಗಿ ಆಡಳಿತದಲ್ಲಿ ಸುಧಾರಣೆ ಕೈಗೊಂಡು, ಆ ಮೂಲಕ ಜನಜೀವನದ ಗುಣಮಟ್ಟದಲ್ಲಿ ಉತ್ತಮಿಕೆಯನ್ನು ಸಾಧಿಸಿದ್ದು ಅದ್ಭುತ ಅದೂ ಹೀಗಾಗಿದ್ದು ಸಾವಿರಾರು ವರ್ಷಗಳ ಹಿಂದೆ ಎಂಬುದು ಇನ್ನೂ ಆಶ್ಚರ್ಯದ ವಿಚಾರ. ಇದಕ್ಕಾಗಿ ಸುಮಾರು ಶಾಸನಗಳ ಅಧ್ಯಯನ ಮಾಡಿದ್ದಾಯಿತು. ಈಜಿಪ್ಟ್‌ನ ಕಡಲು, ನೈಲ್‌ನದಿ, ಪಿರಮಿಡ್‌ಗಳು, ಮಮ್ಮಿಗಳು, ಮ್ಯೂಸಿಯಂ, ಫಿಲೆದ್ವೀಪ, ಆಸ್ವಾನ್ ಅಣಿಕಟ್ಟು, ಎಡ್ಫುವಿನ ಮಂದಿರ, ಕೈರೋ ಇವನ್ನೆಲ್ಲ ಸಂದರ್ಶಿಸಿ ಕಾಲದ ದೋಣಿಯಲ್ಲಿ ಹಿಂದಕ್ಕೆ ತೇಲಿದ್ದಾಯಿತು.
ಪ್ರಜಾಪ್ರಭುತ್ವವಾಗಲಿ, ರಾಜಪ್ರಭುತ್ವವಾಗಲಿ - ರಾಷ್ಟ್ರಗಳ ಅಭಿವೃದ್ಧಿಗೆ ಆಡಳಿತ ಸುಧಾರಣೆ ಅತ್ಯವಶ್ಯ. ಕಾಲಕಾಲಕ್ಕೆ ಬದಲಾಗುವ ಚಲನಶೀಲ ಸಮಾಜದ ಆದ್ಯತೆಗಳನ್ನೂ, ಅಗತ್ಯಗಳನ್ನು ಸತತ ಅಧ್ಯಯನಕ್ಕೊಳಪಡಿಸಿ ಆ ಮೂಲಕ ಕಂಡುಕೊಂಡ ಅಂಶಗಳನ್ನು ಆಧಾರಿಸಿದ ಆಡಳಿತ ಸುಧಾರಣೆಯೇ ನಮ್ಮ ಆಡಳಿತದ ಆತ್ಮವಾಗಬೇಕೆಂದು ನಾನು ತಿಳಿದಿದ್ದೇನೆ. ಆಡಳಿತವೆಂದರೆ ಅಧಿಕಾರ ಎಂದೇ ತಿಳಿದ ಜನರು ಆಡಳಿತವು ಅಧಿಕಾರವನ್ನು ಮೀರಿದ ದಿವ್ಯ ಎಂಬುದು ತಿಳಿಯಬೇಕಾದರೆ ಚರಿತ್ರೆಯತ್ತ ಹೊರಳಲೇಬೇಕು. ತನ್ನ ಸುಧಾರಣಿಯ ಹೊಳಹಿನ ಹಾದಿಯಿಂದ ಪ್ರಾಚೀನ ಈಜಿಪ್ಟ್‌ನ ವಾಣಿಜ್ಯ, ವ್ಯವಹಾರ, ವಿದೇಶಾಂಗ ನೀತಿಯಲ್ಲಿ ಮೌಲ್ಯಯುತ ಬದಲಾವಣೆ ತಂದವಳು ಒಬ್ಬ ಸ್ತ್ರೀ ಕುರುಬರ, ನೇಕಾರರ, ಮೀನುಗಾರರ, ಗಣಿಕೆಯರ, ಶ್ರಮಿಕರ ಜೀವನವನ್ನು ಬೆಳಗಿದ ಅನೆಪ್ ಈಜಿಪ್ಟ್‌ನ ಮಗಳಾಗಿ, ತಾಯಿಯಾಗಿ, ಕಡೆಗವರ ದೇವಿಯೇ ಆಗಿ ಅರಳಿದ ಪರಿ ನಿಮಗೆಲ್ಲ ಆಪ್ತವಾದೀತೆಂದು ನಾನಾದರೂ ಭಾವಿಸಿದ್ದೇನೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 212 |
| ಪ್ರಕಟಣೆ ವರ್ಷ | 2024 |
| ಆವೃತ್ತಿ | 1st |
| ತೂಕ | 550 ಗ್ರಾಂ |
| ಆಯಾಮಗಳು | - |



