ಕಾದಂಬರಿ
ಬೆಸುಗೆಯ ಬಂಧನದಲ್ಲಿ... ಬಾ ಮತ್ತು ಬಾಪು - ದಾಂಪತ್ಯ ಕಥನ
ಲೇಖಕ: ಡಾ. ವಿಜಯಾ ಸುಬ್ಬರಾಜ್
₹360₹40010% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ಬಾ ಮತ್ತು ಬಾಪುರ ದಾಂಪತ್ಯ ಸರಳವೂ ಅಲ್ಲ, ಸುಖಮಯವೂ ಅಲ್ಲ, ಮದುವೆ ಯಾದಂದಿನಿಂದ ಕಡೆಯುಸಿರಿನವರೆಗೂ ಒಂದೊಂದು ಹಂತದಲ್ಲಿ, ದಾಂಪತ್ಯದಲ್ಲಿ ಘರ್ಷಣೆ, ಮಾತಿನ ಚಕಮಕ ಇದ್ದೇ ಇರುತ್ತಿತ್ತು. ಗಾಂಧಿ ಮುಂದೆ ಮಹಾತ್ಮನಂತೆ ತ್ರಿವಿಕ್ರಮನಂತೆ ಗುರುತಿಸಿಕೊಂಡಿದ್ದರೂ, ಎಲ್ಲ ಹಂತಗಳಲ್ಲಿ, ಮನುಷ್ಯ ಸಂಬಂಧಗಳ ನೆಲೆಯಲ್ಲಿ ಸಾಮಾನ್ಯ ಮನುಷ್ಯನಂತೆ, ಮಾನವ ಸಹಜ ದೌರ್ಬಲ್ಯಗಳಿಂದ ಕೂಡಿಯೇ ವರ್ತಿಸುತ್ತಿದ್ದ. ಕೋಪ, ತಾಪ, ಸಿಟ್ಟು, ಸೆಡವು, ಪುರುಷಾಹಂಕಾರ ನಿಷ್ಠುರತೆ ಮತ್ತು ತನ್ನ ಸಿದ್ಧಾಂತಗಳಿಗೆ, ನಿಷ್ಠುರ ನಿಯಮಗಳಿಗೆ ಬದ್ಧರಾಗಿಯೇ ತನ್ನವರೆಲ್ಲ ನಡೆದುಕೊಳ್ಳಬೇಕೆಂಬ ಹಠಮಾರಿತನ ಅವನ ವ್ಯಕ್ತಿತ್ವದ ಅನನ್ಯ ಭಾಗವಾಗಿತ್ತು. ಜೊತೆಗೆ ಉದಾತ್ತ ಮಾನವೀಯ ಗುಣಗಳಾದ ಪ್ರೀತಿ, ಕರುಣೆ, ಸಹಾನುಭೂತಿ ಅನುಕಂಪ ದೀನದಲಿತರ ಬಗ್ಗೆ ಕಾಳಜಿ, ಜಾತ್ಯಾತೀತತೆ, ಸಾಮಾಜಿಕ ಸಮಾನತೆಯ ತುಡಿತ, ಸಮಷ್ಠಿ ಕ್ಷೇಮ ಚಿಂತನೆ ಇತ್ಯಾದಿ ಭಾವನೆಗಳನ್ನೂ ಎದೆಯಲ್ಲಿರಿಸಿ ಕೊಂಡಿದ್ದ. ಈ ಎಲ್ಲ ಗುಣಗಳೂ ಅವನ ವ್ಯಕ್ತಿತ್ವದ ಭಾಗವಾಗಿದ್ದರೂ, ತನ್ನ ಹೆಂಡತಿ ಮಕ್ಕಳು, ಅಣ್ಣಂದಿರು, ಬಂಧು ಬಾಂಧವರ ವಿಚಾರದಲ್ಲಿ, ತನ್ನ ಸಿದ್ಧಾಂತಗಳಿಗೆ, ನಿಯಮ ನಂಬಿಕೆಗಳಿಗೆ ವಿರುದ್ಧವಾಗಬಹುದೆನ್ನುವ ಕಾರಣಕ್ಕಾಗಿ, ತನ್ನ ಸ್ವಂತ ಕುಟುಂಬವನ್ನೇ ನಿರ್ಲಕ್ಷಿಸಿದ. ಮದುವೆಯ ಹೊಸತರಲ್ಲಿ, ಗಂಡನೆಂಬ ಪುರುಷನೆಂಬ ಅಹಂಕಾರದಲ್ಲಿ, ಹೆಂಡತಿಯನ್ನು ಕಾಡಿದ, ತನ್ನ ಕಾಮಾಸಕ್ತಿಯಿಂದ ಬಳಲಿಸಿದ. ನಾಲ್ಕು ಮಕ್ಕಳ ಜನನಕ್ಕೆ ಕಾರಣನಾದ. ಆದರೆ ಆ ಮಕ್ಕಳ ಜವಾಬ್ದಾರಿ, ಭವಿಷ್ಯದ ವಿಚಾರದಲ್ಲಿ, ನಿರಾಸಕ್ತಿ ನಿರ್ಮಮತೆಯಿಂದ ನಡೆದುಕೊಂಡದ್ದು, ಅವರವರ ವೈಯಕ್ತಿಕ ಆಸೆ, ಆಕಾಂಕ್ಷೆಗಳಿಗೆ ಗಮನಕೊಡದೆ, ತಾನು ನಂಬಿದ ಸಿದ್ಧಾಂತಗಳಿಗೆ, ಅವರ ಭವಿಷ್ಯವನ್ನು ಹೊಸಕಿ ಹಾಕಿದ್ದು, ಅವನ ದೃಷ್ಟಿಯಿಂದ ಸಮರ್ಥನೀಯವೇ ಎನಿಸಿದರೂ ವ್ಯಕ್ತಿ ಸ್ವಾತಂತ್ರ್ಯವನ್ನು ಬಲಿಕೊಟ್ಟಂತೆಯೇ ! ಇಂತಹ ನಿಲುವಿನಿಂದಲೇ, ಛೋಟಾಗಾಂಧಿ ಎಂದು ಕರೆಸಿಕೊಳ್ಳುತ್ತಿದ್ದ ಮತ್ತು ತಂದೆಯಂತೆಯೇ ಸತ್ಯಾಗ್ರಹ ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ, ಎಲ್ಲರ ಕಣ್ಣಲ್ಲಿ ಗಾಂಧಿಯ ಮುಂದುವರಿಕೆಯ ವಾರಸುದಾರನಾಗುವ ಭರವಸೆಗಳನ್ನು ಹುಟ್ಟು ಹಾಕಿದ್ದ ಹರಿಲಾಲ ಗಾಂಧಿ ತನ್ನ ಸ್ವಂತ ತಂದೆಯ ಬದ್ಧ ಶತ್ರುವಾಗಿ, ಕಡೆ ಕ್ಷಣಗಳವರೆಗೆ ದ್ವೇಷಿಸುತ್ತಿದ್ದುದು ಒಂದು ದುರಂತವೇ ಸರಿ.
ನ್ನು ಹೆಂಡತಿಯ ವಿಷಯಕ್ಕೆ ಬಂದರೆ, ಇಂತಹ ನಿಷ್ಠುರಿ ಗಂಡನೊಡನೆ ಬದುಕುವುದು ಕ್ಷಣ ಕ್ಷಣಕ್ಕೂ ಅಗ್ನಿಪರೀಕ್ಷೆಯಂತೆ ಇತ್ತು. ಕಸ್ತೂರ್ ಸನಾತನ ಪರಂಪರೆಯಲ್ಲಿ, ಸಂಪ್ರದಾಯಸ್ಥ ಪರಿಸರದಲ್ಲಿ ಬೆಳೆದವಳು. ಅವಳು ಕಲಿತದ್ದು, ಗಂಡನಿಗೆ ವಿಧೇಯಳಾಗಿ, ಅವನ ಹೆಜ್ಜೆ ಜಾಡಿನಲ್ಲಿ, ಅವನ ಮನಸ್ಸು ಮರ್ಜಿಗಳನ್ನು ಅನುಸರಿಸಿ, ಬದುಕಬೇಕೆಂಬ ನೀತಿಯನ್ನು. ಅವನನ್ನು ಪ್ರಶ್ನಿಸುವುದಾಗಲೀ, ಪ್ರತಿಭಟಿಸುವುದಗಲೀ ಹೆಂಡತಿಯ ಹಕ್ಕಿನ ವ್ಯಾಪ್ತಿಗೆ ಬರುವಂಥದ್ದೇ ಅಲ್ಲ. ಅವನ ಬದುಕಿನ ಆಶಯಗಳನ್ನು ಪೂರೈಸುವಲ್ಲಿ, ಆದರ್ಶಗಳ ಅನುಸಂಧಾನದಲ್ಲಿ ಸಹಕರಿಸಬೇಕೆಂಬುದಷ್ಟೇ ತನ್ನ ಜೀವನದ ಧ್ಯೇಯವಾಗಿ ಇರಿಸಿಕೊಳ್ಳಬೇಕೆಂಬ ತತ್ವಕ್ಕೆ ಬದ್ಧಳಾಗಿ ಬಾಳುವುದನ್ನೇ ರೂಡಿಸಿಕೊಂಡಿದ್ದವಳು ಕಸ್ತೂರಬಾ. ಆದ್ದರಿಂದಲೇ ಗಂಡ ತನ್ನೊಡನೆ ಎಷ್ಟೇ ಕ್ರೂರವಾಗಿ ನಡೆದುಕೊಂಡರೂ, ರೇಗಾಡಿದರೂ, ಕೂಗಾಡಿದರೂ, ಸಣ್ಣವರ, ದೊಡ್ಡವರ, ಸರೀಕರ ಮುಂದೆ ಅವಮಾನ ಮಾಡಿದರೂ ನಂಜನ್ನು ನುಂಗಿದ ನಂಜುಂಡನಂತೆ, ಬಾಳುತ್ತಲೇ, ಮನೆ, ಮಕ್ಕಳು, ಆಶ್ರಮವಾಸಿಗಳ ಜವಾಬ್ದಾರಿಗಳನ್ನು ಹೆಗಲಿಗಿರಿಸಿಕೊಂಡೇ, ಅವನ ಸಿದ್ಧಾಂತಗಳಿಗೆ ಬದ್ಧಳಾಗಿ, ಅವನೆಲ್ಲ ಕೆಲಸ ಕಾರ್ಯಗಳಲ್ಲಿ, ಹೋರಾಟಗಳಲ್ಲಿ, ಚಳುವಳಿಗಳಲ್ಲಿ ಸತ್ಯಾಗ್ರಹಗಳಲ್ಲಿ, ಸ್ವಯಂ ಸೇವಾಕಾರ್ಯಗಳಲ್ಲಿ, ಗ್ರಾಮೋದ್ಧಾರದ ಕೆಲಸಗಳಲ್ಲಿ, ಗ್ರಾಮೀಣ ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ, ಅಕ್ಷರ ಕಲಿಸುವಲ್ಲಿ, ಹರಿಜನ ಸೇವೆಯಲ್ಲಿ... ಖಾದಿ ಪ್ರಚಾರದಲ್ಲಿ - ಹೀಗೆ ಒಂದಲ್ಲ ಎರಡಲ್ಲ, ನೂರೆಂಟು ಬಗೆಯ ಕೆಲಸಗಳಲ್ಲಿ, ದಕ್ಷತೆಯಿಂದ, ಬದ್ಧತೆಯಿಂದ, ದೇಹಬಲ ಎಷ್ಟೋ ಬಾರಿ ಸಹಕರಿಸದಿದ್ದರೂ, ಆತ್ಮಬಲದಿಂದ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು, ದಕ್ಷಿಣ ಆಫ್ರಿಕಾದ ಭಾರತೀಯರ ಕಣ್ಣಲ್ಲಿ, ದೇಶವಾಸಿಗಳ ಮನದಲ್ಲಿ ಗೌರವಾದರ, ಪ್ರೀತಿಗಳನ್ನು ಸಂಪಾದಿಸಿದ್ದಳು. ಹಾಗೆ ನೋಡಿದರೆ ಗಾಂಧಿಯ ಪ್ರೀತಿ, ಗೌರವಗಳನ್ನು ಗಳಿಸುವಲ್ಲಿಯೂ ಯಶಸ್ವಿಯಾದಳು. ಗಾಂಧಿ ಪ್ರಬುದ್ಧನಾಗುತ್ತಿದ್ದಂತೆ, ಅನುಭವ ವಿಸ್ತಾರವಾಗುತ್ತಿದ್ದಂತೆ, ಹೆಣ್ಣು-ಗಂಡು ಸಂಬಂಧ ಸೂಕ್ಷ್ಮತೆಗಳನ್ನು ಗ್ರಹಿಸುತ್ತಿದ್ದಂತೆ, - ಹೆಂಡತಿ ಬಗೆಗಿದ್ದ ಪುರುಷಾಹಂಕಾರ ಸೋರಿ ಹೋಗಿ, ಹೆಣ್ಣಿನೊಳಗಿನ ಅಖಂಡ ಶಕ್ತಿಯನ್ನು ಗುರುತಿಸಿ, ತನ್ನ ರಾಜಕೀಯ ಹೋರಾಟಗಳಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲು ಅನುವು ಮಾಡಿಕೊಟ್ಟಿದ್ದೇ ಅಲ್ಲದೆ, ಭಾಗವಹಿಸಲು ಪ್ರೇರಕಶಕ್ತಿಯಾಗಿ ಟೊಂಕಕಟ್ಟಿ ನಿಂತ ಹೆಂಡತಿ, ಕಸ್ತೂರಳ ಬಗ್ಗೆ ಅವನಲ್ಲಿದ್ದ ಕ್ಷುಲ್ಲಕ ಭಾವನೆಗಳೆಲ್ಲ ಬತ್ತಿ ಹೋಗಿ, ಅವಳಲ್ಲಿನ ಸುಪ್ತ ಚೈತನ್ಯದ ಬಹುಮುಖತೆಯನ್ನು ಕೊಂಡಾಡಿದ.
ಒಂದು ಕಡೆ ಗಾಂಧಿ, ಬಾಳ ಬುದ್ಧಿವಂತಿಕೆ, ಚಾಣಾಕ್ಷತನ, ಸಮಯ ಪ್ರಜ್ಞೆ, ಪರಿಸ್ಥಿತಿಗಳನ್ನು ಎದುರಿಸುವ ಸಾಮರ್ಥ್ಯ, ದಿಟ್ಟತನ - ತರ್ಕಬದ್ಧ ವಿಚಾರಗಳು - ಆತ್ಮಾಭಿಮಾನ, ನಿಜವಾದ ಅಹಿಂಸೆಯನ್ನು ಅರ್ಥಮಾಡಿಸುವ ಕ್ಷಮತೆಗಳನ್ನು ಗುರುತಿಸಿ, ಅವಳ ಬಗ್ಗೆ ಉದಾತ್ತ ನಿಲುವನ್ನು ತಳೆದಿದ್ದ. ಹಾಗೆಂದು ತನ್ನ ಸಿದ್ಧಾಂತಗಳನ್ನು ಅತಿಕ್ರಮಿಸಿ ಯಾವುದೇ ಬಗೆಯ ರಿಯಾಯಿತಿಗಳನ್ನು ನೀಡುತ್ತಿರಲಿಲ್ಲ. ಕಸ್ತೂರ್ ಅದನ್ನು ನಿರೀಕ್ಷಿಸುತ್ತಲೂ ಇರಲಿಲ್ಲ. ಆಳದಲ್ಲಿ ಕಸ್ತೂರಳನ್ನು, ಗಾಂಧಿ ಅತಿಯಗಿ ಪ್ರೀತಿಸುತ್ತಿದ್ದನಷ್ಟೇ ಅಲ್ಲದೆ, ಅವಳಿಲ್ಲದೆ, ಅವಳನ್ನು ಅವಲಂಬಿಸದೆ ತನಗೆ ಬದುಕೇ ಇಲ್ಲವೆಂದು ಭಾವಿಸಿದ್ದ. ಅನೇಕ ಸಂದರ್ಭಗಳಲ್ಲಿ ಅವನ ಈ ಭಾವನೆಗಳು ವ್ಯಕ್ತವಾಗಿದ್ದವು. ಅವಳ ಕಾರ್ಯಕ್ಷಮತೆ, ಆತ್ಮವಿಶ್ವಾಸ, ನ್ಯಾಯಪರ ನಿಲುವುಗಳು, ಎಂಥದೇ ಕಷ್ಟಕರವಾದ, ಸಂಕೀರ್ಣವಾದ ಸಂದರ್ಭ. ಸನ್ನಿವೇಶಗಳ ಮೂಲಕ ಯಶಸ್ವಿಯಾಗಿ ಹೊಮ್ಮಿಬರುವ ಸಾಮರ್ಥ್ಯ ಗಳನ್ನು ಗುರುತಿಸಿ, ಹೋರಾಟಗಳಲ್ಲಿ ತನ್ನ ಅನನ್ಯ ಸಂಗಾತಿಯಾಗಿ ಜೊತೆಗೆ ಇರಿಸಿಕೊಂಡಿದ್ದ.
ವಿಶೇಷತೆಗಳು
| ISBN | 978-93-81577-48-6 |
| ಭಾಷೆ | ಕನ್ನಡ |
| ಪುಟಗಳು | 352 |
| ಪ್ರಕಟಣೆ ವರ್ಷ | 2016 |
| ಆವೃತ್ತಿ | 3rd Edition |
| ತೂಕ | 650 ಗ್ರಾಂ |
| ಆಯಾಮಗಳು | Book Size : 1/4 Crown(23x15.5) (International Standard Book Size) |



