ವಿಮರ್ಶೆ
ಬೇಡ ಬುಡಕಟ್ಟಿನ ಭಾಷಿಕ ಸಂಕಥನ
ಲೇಖಕ: ಡಾ. ಆಂಜನೇಯ ಉರ್ತಾಳ್
₹240₹28014% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್‌ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
‘ಬೇಡ ಬುಡಕಟ್ಟಿನ ಭಾಷಿಕ ಸಂಕಥನ’ ಎನ್ನುವ ಈ ಸಂಶೋಧನಾ ಕೃತಿ ಹಲವು ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಮೊದಲಿಗೆ ಪ್ರಸ್ತಾವನೆಯಲ್ಲಿ ಅಧ್ಯಯನದ ಉದ್ದೇಶ, ಸ್ವರೂಪ ಮತ್ತು ವ್ಯಾಪ್ತಿಯ ಜೊತೆಗೆ ಯಾವ ತಾತ್ವಿಕ ನೆಲೆಗಟ್ಟಿನ ಮೇಲೆ ಈ ಅಧ್ಯಯನ ಕೈಗೊಳ್ಳಲಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಲಾಗಿದೆ.
ಬುಡಕಟ್ಟು ಸಮುದಾಯವನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆರಂಭದಲ್ಲೇ ಚಿತ್ರದುರ್ಗ ಜಿಲ್ಲೆಯ ಭೌಗೋಳಿಕ ಮತ್ತು ಚಾರಿತ್ರಿಕ ಪರಿಚಯ ಮಾಡಿಕೊಟ್ಟಿದ್ದಾರೆ. ಜೊತೆಗೆ ಮ್ಯಾಸಬೇಡ ಬುಡಕಟ್ಟು ಸಮುದಾಯದ ಪೌರಾಣಿಕ ಮತ್ತು ಚಾರಿತ್ರಿಕ ಹಿನ್ನೆಲೆಯನ್ನು, ಅದೇ ಬುಡಕಟ್ಟು ಸಮುದಾಯದಲ್ಲಿ ಇರುವ ಒಳಪಂಗಡಗಳ ವಿವರಗಳನ್ನು ಹಾಗೂ ಸಮುದಾಯದ ಅಧ್ಯಯನಗಳ ಅವಲೋಕನವನ್ನು ಮತ್ತು ಅವರ ಭಾಷಿಕ ಪರಿಸರವನ್ನು ಅಧ್ಯಯನಕ್ಕೆ ಪೂರಕವಾಗಿ ನೀಡಿರುವುದು ಅಧ್ಯಯನಕ್ಕೆ ಒಂದು ಗಟ್ಟಿಯಾದ ಬುನಾದಿ ಹಾಕಿದಂತಾಗಿದೆ.
ಶ್ರೀ ಆಂಜನೇಯ ಉರ್ತಾಳ್ ಅವರು ಈ ಕೃತಿಯಲ್ಲಿ ಮ್ಯಾಸಬೇಡರು ತಮ್ಮ ಕೌಟುಂಬಿಕ ವಲಯದಲ್ಲಿ ಮತ್ತು ವ್ಯಾವಹಾರಿಕ ವಲಯಗಳಲ್ಲಿ ಕನ್ನಡವನ್ನು ಹೇಗೆ ಬಳಸುತ್ತಾರೆ ಎನ್ನುವುದನ್ನು ಸಂಬಂಧವಾಚಕಗಳು, ಸಂಬೋಧನಾರೂಪಗಳು, ವ್ಯಕ್ತಿನಾಮ ಮತ್ತು ಸ್ಥಳನಾಮಗಳ ನಿದರ್ಶನಗಳ ಸಹಿತ ವಿಶದಪಡಿಸಿದ್ದಾರೆ. ಹಾಗೆಯೇ ದಿನನಿತ್ಯದ ವ್ಯಾವಹಾರಿಕ ವಲಯಗಳಾದ ಕೃಷಿ, ಮಾರುಕಟ್ಟೆ, ಹೋಟೆಲ್, ಆಸ್ಪತ್ರೆ, ಶಾಲಾ ಆವರಣಗಳಲ್ಲಿ ಅವರು ಬಳಸುವ ಕನ್ನಡವನ್ನು ಕುರಿತು ವರ್ಣನಾತ್ಮಕ ಮತ್ತು ಸಮಾಜೋಭಾಷಿಕ ನೆಲೆಯಲ್ಲಿ ಚರ್ಚೆಗೊಳಪಡಿಸಿದ್ದಾರೆ. ಹೀಗೆ ನುಡಿಯನ್ನು ಬಳಸುವಾಗ ಮ್ಯಾಸಬೇಡರ ಮಾತೃಭಾಷೆಯಾದ ತೆಲುಗು ನುಡಿಯ ಮೇಲೆ ಕನ್ನಡ ಭಾಷೆಯ ಪ್ರಭಾವ ಹೇಗಾಗಿದೆ ಎನ್ನುವುದನ್ನು ಮತ್ತು ನುಡಿಬಳಕೆಯ ಯಾವ ವಲಯಗಳಲ್ಲಿ ಕನ್ನಡ ಹೆಚ್ಚು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ಯಾವ ಯಾವ ವಲಯಗಳಲ್ಲಿ ಪ್ರವೇಶಿಸಲು ಆಗಿಲ್ಲ ಎನ್ನುವುದನ್ನು ಸಾಮಾಜಿಕ ಸಂದರ್ಭವನ್ನು ಅನುಲಕ್ಷಿಸಿ ಭಾಷಾವೈಜ್ಞಾನಿಕವಾಗಿ ವಿಶ್ಲೇಷಣೆಗೆ ಆಗುಮಾಡಿರುವುದು ಅಧ್ಯಯನಕ್ಕೆ ಒಂದು ಗಟ್ಟಿತನ ತಂದುಕೊಟ್ಟಂತಾಗಿದೆ.
ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಮ್ಯಾಸಬೇಡರ ಕನ್ನಡದ ನುಡಿಬಳಕೆಯಲ್ಲಿ ಆದ ನುಡಿಬೆರಕೆ ಮತ್ತು ನುಡಿಪಲ್ಲಟಗಳು ಹೇಗೆ ಸಹಜ ಪ್ರಕ್ರಿಯೆಯಾಗಿವೆ ಎನ್ನುವುದನ್ನು ಲೇಖಕರು ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಜೊತೆಗೆ ಕನ್ನಡ-ತೆಲುಗು ದ್ವಿಭಾಷಿಕ ಪರಿಸರದಲ್ಲಿ ಬದುಕುತ್ತಿರುವ ಮ್ಯಾಸಬೇಡರ ತೆಲುಗು ಭಾಷಾ ಬಳಕೆಯಲ್ಲಿ ಮತ್ತು ಕನ್ನಡ ಭಾಷಾ ಬಳಕೆಯಲ್ಲಿ ಆದ ಬದಲಾವಣೆಗಳನ್ನು ಹಲವಾರು ಉದಾಹರಣೆಗಳ ಮೂಲಕ ಅಂಕಿ ಅಂಶಗಳ ಸಹಿತ ವಿವರಿಸಿದ್ದಾರೆ. ಮ್ಯಾಸಬೇಡರು ಕನ್ನಡ ಭಾಷೆಯನ್ನು ಕಲಿತು ಬಳಸುವಾಗ ಸಹಜವಾಗಿಯೇ ಅವರ ಕನ್ನಡದಲ್ಲಿ ನಡೆಯುವ ನುಡಿಪಲ್ಲಟ ಮತ್ತು ನುಡಿಜಿಗಿತಗಳನ್ನು ಒಳಗೊಂಡಿರುವುದಲ್ಲದೆ ಇವರಾಡುವ ಕನ್ನಡ ನುಡಿ ಸಹಜ ಕನ್ನಡಕ್ಕಿಂತ ಮತ್ತು ಸಹಜ ತೆಲುಗಿಂತ ಹೇಗೆ ಭಿನ್ನವಾಗಿ ರೂಪುಗೊಂಡಿದೆ ಎನ್ನುವುದನ್ನು ಅನೇಕ ಉದಾಹರಣೆಗಳೊಂದಿಗೆ ವಿಶ್ಲೇಷಣೆ ಗೊಳಪಡಿಸಿದ್ದಾರೆ.
ಒಂದು ಭಾಷಾ ಸಮುದಾಯದ ಜನರು ಮತ್ತೊಂದು ಭಾಷಿಕ ಪರಿಸರದಲ್ಲಿ ಬದುಕಬೇಕಾದ ಅನಿವಾರ್ಯತೆಗಳು ಬಂದಾಗ ಹೇಗೆ ದ್ವಿಭಾಷಿಕರಾಗುತ್ತಾರೆ. ಹೀಗೆ ದ್ವಿಭಾಷಿಕರಾದ ಮೇಲೆ ಕಾಲಕ್ರಮೇಣದಲ್ಲಿ ಅವರ ಮಾತೃಭಾಷೆಯ ಪದಕೋಶದಲ್ಲೂ ಮತ್ತೊಂದು ಭಾಷೆಯ ಪದಗಳು ಹೇಗೆ ಸೇರಿಕೊಳ್ಳುತ್ತವೆ ಎನ್ನುವುದನ್ನು ಮತ್ತು ತಮ್ಮ ಮಾತೃಭಾಷೆಯ ಛಾಯೆಗಳು ಸ್ಥಳೀಯ ಭಾಷೆಯ ಮೇಲೂ ಹೇಗಾಗುತ್ತದೆ ಎನ್ನುವುದನ್ನು ಕೂಡ ಅಧ್ಯಯನಕಾರರು ಸಾಕಷ್ಟು ವಿವರವಾಗಿ ಕ್ಷೇತ್ರಕಾರ್ಯದಲ್ಲಿ ದೊರೆತ ಅಂಕಿ ಅಂಶಗಳನ್ನು ಕೋಷ್ಟಕಗಳ ಮೂಲ ಚರ್ಚಿಸಿರುವುದು ಸೂಕ್ತವಾಗಿದೆ.
ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಮ್ಯಾಸಬೇಡರ ಸಮುದಾಯವು ಮೂಲತಃ ಆಂಧ್ರಪ್ರದೇಶದವರಾಗಿರುವುದರಿಂದ ಅವರ ಮನೆ ಮಾತು ತೆಲುಗು. ಆದರೆ ಈ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಕನ್ನಡದ ಪ್ರದೇಶಕ್ಕೆ ವಲಸೆ ಬಂದು ನೆಲೆಸಿರುವುದರಿಂದ ಆಡಳಿತಾತ್ಮಕವಾಗಿ, ಶೈಕ್ಷಣಿಕವಾಗಿ ಸಹಜವಾಗಿಯೇ ಕನ್ನಡ ಭಾಷೆಗೆ ಪಲ್ಲಟಗೊಂಡಿದ್ದಾರೆ. ಹಾಗಂತ ಅವರು ತಮ್ಮ ಮಾತೃಭಾಷೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದು ಹೇಳಲು ಬರುವುದಿಲ್ಲ. ಆದರೆ ಕನ್ನಡ ತೆಲುಗು ಭಾಷೆಯನ್ನು ಬಳಸುವ ವಲಯಗಳು ಪ್ರತ್ಯೇಕವಾಗಿವೆ. ತಲೆಮಾರಿನಿಂದ ತಲೆಮಾರಿಗೆ ಎರಡೂ ಭಾಷಾಬಳಕೆಯ ವಲಯಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಕಾಲಕ್ರಮೇಣ ತಮ್ಮ ಮೂಲನುಡಿಯ ಬಳಕೆ ಕಡಿಮೆಯಾಗಿ ಅವರೆಲ್ಲ ಈ ಪ್ರದೇಶದ ಭಾಷೆಗೆ ಪಲ್ಲಟ ಗೊಳ್ಳುತ್ತಿದ್ದಾರೆ ಎನ್ನುವುದನ್ನು ವಯಸ್ಸು ಮತ್ತು ಲಿಂಗಾನುಪಾತದಲ್ಲಿ ಈ ಅಧ್ಯಯನ ಸ್ಪಷ್ಟಪಡಿಸುತ್ತದೆ. ಆದರೆ ನೂರಾರು ವರ್ಷಗಳಿಂದ ಮಾತೃಭಾಷೆಯಾಗಿ ಬಳಕೆಯಲ್ಲಿದ್ದ ತೆಲುಗು ತನ್ನಷ್ಟಕ್ಕೆ ತಾನೆ ಆಪ್ತವಲಯದಲ್ಲಿ ಸಂಗೋಪನೆಯೂ ಆಗುತ್ತಿದೆ ಎನ್ನುವುದನ್ನು ಕೂಡ ಈ ಅಧ್ಯಯನ ತಿಳಿಸುತ್ತದೆ. ಇದನ್ನು ಅಧ್ಯಯನಕಾರರು ನೀಡಿದ ಕೋಷ್ಟಕಗಳಿಂದ ಸ್ಪಷ್ಟಪಡಿಸಿಕೊಳ್ಳಬಹುದು. ಹಾಗೆಯೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಬಂದ ಭಾಷಿಕರು ಸ್ಥಳೀಯ ಮತ್ತೊಂದು ಭಾಷಿಕ ಸಂದರ್ಭದಲ್ಲಿ ಬದುಕುವಾಗ ಅವರ ಭಾಷಾಮನೋಭಾವ ಮತ್ತು ಭಾಷಾನಡವಳಿಕೆ ಹೇಗಿರುತ್ತದೆ ಎನ್ನುವುದನ್ನೂ ಕೂಡ ಶ್ರೀ ಆಂಜನೇಯ ಉರ್ತಾಳ್ ಅವರು ಸರಿಯಾಗಿಯೇ ಗುರುತಿಸಿದ್ದಾರೆ.
ವಿಶೇಷತೆಗಳು
| ISBN | 978-93-343-0624-8 |
| ಭಾಷೆ | ಕನ್ನಡ |
| ಪುಟಗಳು | 248 |
| ಪ್ರಕಟಣೆ ವರ್ಷ | 2025 |
| ಆವೃತ್ತಿ | 1st |
| ತೂಕ | 400 ಗ್ರಾಂ |
| ಆಯಾಮಗಳು | - |





