ಮುಖ್ಯ ವಿಷಯಕ್ಕೆ ಹೋಗಿ (Skip to main content)
ನಾನೆಂಬುದು ಕಿಂಚಿತ್ತು (ಆತ್ಮಕಥನ) ಮೊಗಳ್ಳಿ ಗಣೇಶ್
ಹೊಸ ಬಿಡುಗಡೆಬೆಸ್ಟ್ ಸೆಲ್ಲರ್15% ರಿಯಾಯಿತಿ
ಆತ್ಮಕಥನ

ನಾನೆಂಬುದು ಕಿಂಚಿತ್ತು (ಆತ್ಮಕಥನ) ಮೊಗಳ್ಳಿ ಗಣೇಶ್

ಲೇಖಕ: ಮೊಗಳ್ಳಿ ಗಣೇಶ್

₹360₹42515% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಇದು ನನ್ನ ಆತ್ಮಕಥನ. ಸೃಜನಶೀಲ ಬಣ್ಣಗಳಲ್ಲಿ ಬರೆದಿರುವೆ. ಹಾಗಾಗಿ ಮೇಲು ನೋಟಕ್ಕೆ ಇದೊಂದು ಕಾದಂಬರಿಯಂತೆ ಕಂಡರೆ ಅಚ್ಚರಿ ಇಲ್ಲ. ಬಣ್ಣ ಕಟ್ಟುವುದು ಮರೆ ಮೋಸವಲ್ಲ. ಗಮನ ಸೆಳೆಯುವಂತದ್ದು. ಬಣ್ಣಗೆಟ್ಟ ಬದುಕನ್ನು ಅಸಹನೀಯತೆಯನ್ನು ಸಂವೇದನಾ ಶೀಲತೆಯಲ್ಲಿ ಅದ್ದಿ ಕರಗಿಸಿ ಸಹ್ಯಗೊಳಿಸುವ ಪರಿಯು ನನ್ನ ಯಾವತ್ತಿನ ಬರಹದ ಗುಣವಾಗಿದೆ. ವ್ಯಕ್ತಿಯ ಅನುಭವ ಸೃಜನಶೀಲತೆಯಲ್ಲಿ ರೂಪಾಂತರವಾಗುತ್ತದೆ. ಅವರವರ ಸಾಂದ್ರತೆ ತೀವ್ರತೆ ನೆರವಿಗೆ ಬರುತ್ತದೆ. ವಯಕ್ತಿಕ ಅನುಭವ ಲೋಕದ ಉಳಿದ ಮಾನವರ ಭಾವಕ್ಕೂ ಲೀನವಾಗಬೇಕು. ಅದಕ್ಕೆ ಆಗ ಮಾನವತೆಯ ಬೇರು ಮುಖ್ಯ. ನನ್ನ ಅರವತ್ತನೆಯ ವರ್ಷಕ್ಕೆ ಈ ಆತ್ಮಕಥೆಯನ್ನು ಬರೆದೆ. ಲೋಕಮಾನ್ಯವಾದದ್ದು ಇಲ್ಲಿ ಅಂತದ್ದೇನೂ ಇಲ್ಲ. ಸಣ್ಣ ಸಣ್ಣ ಸಂಗತಿಗಳು... ಬಾಲ್ಯಕಾಲದ ದಿಕ್ಕೆಟ್ಟ ದೀನ ದುಸ್ಥಿತಿಗಳು ಆರ್ದ್ರತೆಯ ಕಡಲಿಗಾಗಿ ಹಪಹಪಿಸು ನಿರೂಪಗಳು ದುಃಖದ ತಬ್ಬಲಿತನದ ಒಂದು ಹಣತೆ ನೀಲಿ ಬೆಳಕ ನಾಲಿಗೆಯಲ್ಲಿ ಹೋಗದಿರು ಎಂಬಂತೆ ಹಿಡಿದುಕೊಂಡೇ ಬಿರಿವ ಕತ್ತಲಲ್ಲಿ ತೆಳುಗಾಳಿಗೂ ಕಂಪಿಸುತ್ತ ಸಾಯದೆ ಹಾಗೇ ಉರಿಯುತ್ತಲೇ ಇರುತ್ತದಲ್ಲಾ... ಆ ಬಗೆಯಲ್ಲಿ ಈ ಬರಹವ ಮೈದುಂಬಿ ಭಾವವ ಬಸಿದು ಬರೆದಿರುವೆ. ಬೆಳೆದಂತೆ ಸುತ್ತಲ ಲೋಕದ ಬೇಟೆಯಾಟದಲ್ಲಿ ಸಿಲುಕಿ ಅದೆಷ್ಟು ಬೆಂದೆನೊ... ಪ್ರತಿ ಕ್ಷಣವೂ ಜೀವನ್ಮರಣದ ಪ್ರಶ್ನೆಯಾಗಿತ್ತು. ಬೇಟೆ ಆಡಿದವರೆಲ್ಲ ನಮ್ಮವರೇ... ಚಿಂತಕರು, ಲೇಖಕರು, ಬುದ್ದಿಜೀವಿಗಳು ಆತ್ಮೀಯರೇ ನನ್ನ ದಂಡಿಸಿದರು... ಒಂದರ್ಥದಲ್ಲಿ ಕೊಂದು ಬಿಟ್ಟಿದ್ದರು. ಹಾಗೆಯೇ ಸಂತೈಸಿ ಮನದ ಗಾಯಗಳಿಗೆ ಆರೈಕೆ ಮಾಡುವ ಮಿತ್ರರೂ ಇದ್ದರು. ಆ ತರದವರು ಕೊಟ್ಟ ಆಸರೆಯೆ ನನ್ನನ್ನು ಸರಿದಾರಿಗೇ ಕರೆತಂದದ್ದು. ವಾಸ್ತವವಾದ ಆ ಅನುಭವಗಳನೆಲ್ಲ ಮಾಂತ್ರಿಕ ನಿರೂಪಣೆಯ ಲಯಕ್ಕೆ ತಂದುಕೊಂಡು ರೂಪಾಂತರಿಸಿ ಬರೆದೆ. ಎಷ್ಟೋ ಆಘಾತುಕ ಸಂಗತಿಗಳ ಹೇಳಲಾಗದೆ ಉಳಿಸಿಕೊಂಡೆ. ಸಾಮಾನ್ಯವಾಗಿ ದಲಿತ ಲೇಖಕರು ತಮ್ಮ ಬಾಲ್ಯದ ಹಳ್ಳಿಯ ಅನುಭವಗಳನ್ನೆ ಕಥೆ ಕಾದಂಬರಿ ಮಾಡಿಕೊಳ್ಳುವರು. ತಂತಾನೆ ಅವರ ಇಡೀ ಬರಹಕ್ಕೆ ಆತ್ಮಕಥಾನಕದ ದಾಟಿ ಬಂದುಬಿಡುತ್ತದೆ. ಸ್ಪಷ್ಟವಾಗಿ ಅದನ್ನು ಅವರ ಬರಹಗಳಲ್ಲಿ ಕಾಣಬಹುದು. ನನ್ನ ಕಥೆಗಳಲ್ಲಿ ಬಹಳಷ್ಟು ಸಂಗತಿಗಳು ಆತ್ಮಕಥನದ ಬಿಡಿ ವಿವರ ರೂಪಕಗಳಾಗಿ ಮೂಡಿಬಂದಿವೆ. ಆತ್ಮಕಥೆಯನ್ನು ಕತೆ ಕಾದಂಬರಿಗಳಲ್ಲಿ ಸುಲಭವಾಗಿ ಕರಗಿಸಿಬಿಡಬಹುದು. ಅದೇ ಆತ್ಮಕಥೆಯನ್ನು ಬರೆಯುವಾಗ ಬಹಳ ತೊಡಕು ಎದುರಾಗುತ್ತವೆ. ನಮ್ಮ ಬದುಕಿನ ಜೊತೆಗೇ ಬಂದವರನ್ನು ಯತಾವತ್ತಾಗಿ ತೋರಲಾಗದು. ತುಂಬ ಸೂಕ್ಷ್ಮಗಳಿರುತ್ತವೆ. ನಮ್ಮನ್ನು ಹರಾಜುಹಾಕಿಕೊಂಡಂತೆ ವಿಪರ‍್ಯಾಸವಾಗುತ್ತದೆ. ಸಾಹಿತ್ಯದ ಆಚೆಗೆ ನಮ್ಮ ಬರಹ ಹೊರಟು ಹೋಗಿರುತ್ತದೆ. ಬರಹ ಒಂದಾದರೆ, ಬದುಕಿರುವವರ ಜೀವನದ ಪಾಡೆ ಇನ್ನೊಂದಾಗಿರುತ್ತದೆ. ಎರಡೂ ಎದುರಬದುರಾದಾಗ ನಾವೇ ನಮ್ಮಬರಹಗಳ ಅಪರಾಧಿಗಳೂ ಆಗಿಬಿಟ್ಟಿರುತ್ತೇವೆ. ಇಂತಹ ಸ್ಥಿತಿಯನ್ನು ಸಾಕಷ್ಟು ಎದುರಿಸಿರುವೆ. ಈ ಆತ್ಮಕಥನವ ಹೀಗಾಗಿಯೇ ಬಣ್ಣಗಟ್ಟುವಂತೆ ರೂಪಾಂತರಿಸಿ ಬರೆದಿದ್ದು. ಚಿತ್ರಕಾರನ ಭಾಷೆಯನ್ನು ಇಲ್ಲಿ ಅಳವಡಿಸಿ ಚಹರೆಗಳನ್ನು ಪಾತ್ರಗಳನ್ನಾಗಿಸಿದೆ. ವ್ಯಷ್ಠಿಯನ್ನು ಸಮಷ್ಠಿ ಮಾಡಿದೆ. ನನ್ನ ಬದುಕಿನ ಎಲ್ಲ ಸಂಗತಿಗಳನ್ನು ಇಲ್ಲಿ ಬೆತ್ತಲೆ ಮಾಡಲಿಲ್ಲ. ಬಯಲು ಮಾಡಿದೆ. ಬಹಿರಂಗ ಮಾಡಿದೆ. ಬಹುರೂಪಗೊಳಿಸಿದೆ. ಆ ಕ್ಷಣದಲ್ಲಿ ಮುಖ್ಯ ಎಂದು ಭಾವಕ್ಕೆ ಬಂದ ಸಂಗತಿಗಳ ನಿರೂಪಿಸಿದೆ. ಎಷ್ಟೋ ಜನರ ಒಡನಾಟ, ಸಂದರ್ಭಗಳು ನೆನಪಿಗೇ ಬರಲಿಲ್ಲ. ಇಷ್ಟು ಸಾಕು ಎನಿಸಿತು. ಉದ್ಯೋಗಿ ಆದ ನಂತರದ ನನ್ನ ಜಂಜಡಗಳಿಗೆ ಲೆಕ್ಕವೇ ಇಲ್ಲ. ನನ್ನ ಕಣ್ಣೆದುರಿನ ಸಂಗತಿಗಳವು. ಅವನ್ನೆಲ್ಲ ಬರೆಯಬೇಕು ಎನಿಸಲಿಲ್ಲ. ಕ್ಷುದ್ರತೆಗಳೇ ಅಲ್ಲಿ ನನ್ನ ಕೈಕಾಲು ಹಿಡಿದು ಕಟ್ಟಿಹಾಕಿದ್ದವು. ಬಂಡೆಯಂತಿದ್ದೆ. ಹೋರಾಡಿ ಬಡಿದಾಡಿ ಸಂಸಾರದ ನೀರ ಕುಡಿಯುವಷ್ಟರಲ್ಲಿ ಸಾಕಾಗಿ ಹೋಗುತಿತ್ತು. ಅವುಗಳ ಬಗ್ಗೆ ಬರೆವ ಉತ್ಸಾಹವೇ ಬರಲಿಲ್ಲ. ಆ ಲಡಾಸು ಸಂಗತಿಗಳು ಯಾವ ಓದುಗರಿಗೂ ಅಗತ್ಯವಿರಲಿಲ್ಲ. ನಾನು ಕೂಡ ಎಷ್ಟೋ ತಪ್ಪುಗಳ ಮಾಡಿದ್ದೆ. ನ್ಯಾಯದ ಅಬ್ಬರದ ದನಿಯಲ್ಲಿ ಎದ್ದು ಬಿದ್ದು ಬಡಿದಾಡಿದ್ದೆ. ನನ್ನ ಜೀವನದ ಆ ಕ್ಷಣಗಳ ಈಗ ನೆನೆದರೆ ನಗುಬರುತ್ತದೆ, ನಾಚಿಕೆಯಾಗುತ್ತದೆ, ವಿಷಾದ ಎನಿಸುತ್ತದೆ. ಈ ಆತ್ಮಕಥನ ನನ್ನ ಸುಪ್ತ ಪ್ರಜ್ಞೆಯ ಸತ್ಯಕಥನ. ನನ್ನ ಊರುಕೇರಿ ಸೀಮೆಯ ಜನತೆಯ ನೆರಳಾಗಿ ಬೆಳೆದವನು ನಾನು. ನನ್ನ ಹಳ್ಳಿ ತುಂಬ ಸುಂದರವಾಗಿತ್ತು; ಆದರೆ ಅದರ ಸೌಂದರ್ಯವೇ ಎಲ್ಲೊ ಅದರಲ್ಲೇ ಇದ್ದು ವಿಕೃತರಾಗಿದ್ದವರ ಕಥನದ ನರಕ ಎಲ್ಲೊ... ಅವೆರಡನ್ನೂ ಬಸಿದುಕೊಂಡು ಬದುಕಿ ಬರೆದಿರುವೆ. ಕಾದಂಬರಿ ಬರಿಯೋಣ ಎಂದು ಹೊರಟು; ಆತ್ಮಕಥೆಗೆ ಬಂದು ನಿಂತಿದ್ದೆ. ಅದೇ ಆತ್ಮಕಥೆ ಕಾದಂಬರಿಯ ಗುಣಗಳನ್ನೆ ಆವರಿಸಿಕೊಂಡು ಬಂತು. ವಿಶಾಲವಾಗಿ ಎರಡೂ ಅಂತರಾಳದ ಕಥನಗಳೇ ಆಗಿವೆ. ಸಾಹಿತ್ಯಕ್ಕೂ, ಸಾಹಿತಿಗಳಿಗೂ ಬೆಲೆಯೇ ಇಲ್ಲವಾಗುತ್ತಿರುವ ಕಾಲದಲ್ಲಿ ಈ ಬರಹವ ಮುಂದಿಟ್ಟಿರುವೆ. ಓದಬೇಕೆಂದು ಎಲ್ಲರನ್ನೂ ವಿನಂತಿಸುವೆ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು384
ಪ್ರಕಟಣೆ ವರ್ಷ2023
ಆವೃತ್ತಿ1st
ತೂಕ850 ಗ್ರಾಂ
ಆಯಾಮಗಳು-